ಹಾವೇರಿ: ತವರು ಜಿಲ್ಲೆ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ತಾಲೂಕಿನ ರಾಜೀವ ಗ್ರಾಮದ ಬಳಿ ೩೯ ಕೆರೆಗಳಿಗೆ ನೀರು ತುಂಬಿಸೋ ಯೋಜನೆಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ರೈತರ ಆದಾಯ ಎರಡು ಪಟ್ಟು ಹೆಚ್ಚಿಸೋ ಕೆಲಸ ಮಾಡ್ತಿದ್ದೇನೆ. ಭೂಮಿಯ ಪ್ರಮಾಣ ಕಡಿಮೆ ಆಗ್ತಿದೆ. ರೈತರ ಮಕ್ಕಳು ಬೇರೆಯವರಂತೆ ಮುಂದೆ ಬರಬೇಕು. ನಾನು ಸಿಎಂ ಆಗ್ತಿದ್ದಂತೆ ರೈತರ ಮಕ್ಕಳಿಗೆ ಶಿಷ್ಯವೇತನ ಕೊಡಬೇಕು ಅಂತ ನಿರ್ಧಾರ ಮಾಡಿದೆ. ಇಡೀ ದೇಶದಲ್ಲಿ ಇಂತಹ ಯೋಜನೆ ಇರೋದು ಕರ್ನಾಟಕದಲ್ಲಿ ಮಾತ್ರ. ರೈತರಿಗೆ ಇದು ಮಾತ್ರವಲ್ಲದೆ ಬೇರೆ ಬೇರೆ ರೀತಿಯ ತರಬೇತಿ ಕೊಟ್ಟು ಅವರ ಅಭಿವೃದ್ಧಿ ಆಗುವಂತೆ ಮಾಡುತ್ತೇನೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಆರ್ಸಿಸಿ ಮನೆಗಳು ನೌಕರಿ ಮಾಡೋರದ್ದು ಮಾತ್ರ ಆಗಿದೆ. ಹೀಗಾಗಿ ರೈತರ ಮಕ್ಕಳಿಗಾಗಿ ಯೋಜನೆ ರೂಪಿಸಿದ್ದೇನೆ. ಸಂಧ್ಯಾ ಸುರಕ್ಷಾ, ವಿಧವಾ ವೇತನ, ವಿಕಲಚೇತನರ ವೇತನ ಹೆಚ್ಚಳ ಮಾಡಲಾಗಿದೆ. ಅಧಿಕಾರಿಗಳು ಬಹಳ ದುಡ್ಡು ಆಗುತ್ತೆ. ಅದು ಬಡವರ ದುಡ್ಡು, ಅವರಿಗೆ ಕೊಡಲು ನಿಮಗೇನು ಕಷ್ಟ ಅಂತಾ ಅವರನ್ನು ಕೇಳಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿವರಿಸಿದರು.
ಒಬ್ಬ ಆಡಳಿತಗಾರನಿಗೆ ಜನರ ನಾಡಿಮಿಡಿತ ಗೊತ್ತಿರಬೇಕು. ದುಡಿಮೆ ಇದ್ದ ನಾಡು ಶ್ರೀಮಂತ ಆಗಿರಬೇಕು. ನಾಡಿನ ಜನತೆ ಶ್ರೀಮಂತರಾದ್ರೆ ನಮ್ಮ ಸರ್ಕಾರಗಳು ಶ್ರೀಮಂತ ಆಗುತ್ತವೆ. ನನ್ನ ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಇನ್ನಷ್ಟು ಕಲ್ಪನೆಗಳನ್ನ ಇಟ್ಟುಕೊಂಡಿದ್ದೆ. ಅವೆಲ್ಲವನ್ನೂ ಬರೋ ದಿನಗಳಲ್ಲಿ ಮಾಡಿಕೊಡ್ತೇನೆ. ನೀವೆಲ್ಲರು ನನ್ನ ಮನೆ ದೇವರಿದ್ದಂತೆ. ನಿಮ್ಮ ಪ್ರೋತ್ಸಾಹ ನನಗೆ ಹೆಚ್ಚಿನ ಕೆಲಸ ಮಾಡಲು ಸ್ಪೂರ್ತಿಯಾಗಿದೆ ಎಂದಿದ್ದಾರೆ.
ಎಂತಹ ಸಮಸ್ಯೆಗಳೇ ಬರಲಿ, ಅದನ್ನ ಎದುರಿಸಿ ಕೆಲಸ ಮಾಡೋ ಶಕ್ತಿ ಕೊಟ್ಟಿದ್ದೀರಿ. ನಿಮಗೆ ಕೋಟಿ ಕೋಟಿ ಅಭಿನಂದನೆಗಳು. ಈ ಭಾಗದ ಕೆರೆಗಳನ್ನ ತುಂಬಿಸೋ ಮಾತು ಕೊಟ್ಟಿದ್ದೆ. ಅದು ಈಡೇರಿದೆ. ಅದಕ್ಕಾಗಿ ನನಗೆ ಖುಷಿ ಆಗಿದೆ. ನಾನು ಸಿಎಂ ಆಗಿ ಇಲ್ಲಿಗೆ ಬಂದಿದ್ದಕ್ಕಿಂತ ಕೆರೆ ತುಂಬಿಸಿದ್ದಕ್ಕೆ ಖುಷಿ ಆಗಿದೆ. ನಮ್ಮ ಕ್ಷೇತ್ರದಲ್ಲಿ ಐವತ್ತು ಕೆರೆಗಳನ್ನು ತುಂಬಿಸೋ ಯೋಜನೆ ಮುಗಿಯೋ ಹಂತದಲ್ಲಿದೆ. ಆದಷ್ಟು ಬೇಗ ಯೋಜನೆ ಪೂರ್ಣ ಆಗಿ ಉದ್ಘಾಟನೆ ಆಗುತ್ತದೆ. ರೈತರ ಬದುಕು ಹಸನಾಗಬೇಕು ಎಂದು ಸಿಎಂ ಹೇಳಿದರು.
ಸಿಎಂ ಭಾಷಣಕ್ಕೆ ಕೈಕೊಟ್ಟ ವಿದ್ಯುತ್: ೩೯ ಕೆರೆಗಳಿಗೆ ನೀರು ತುಂಬಿಸೋ ಯೋಜನೆಗೆ ಸಿಎಂ ಚಾಲನೆ ನೀಡಿ ಭಾಷಣ ಮಾಡಲು ವೇದಿಕೆಗೆ ಬಂದಾಗ ವಿದ್ಯುತ್ ಕೈಕೊಟ್ಟಿತು. ಕೆಲಕಾಲ ವೇದಿಕೆಯ ಮೇಲೆಯೇ ನಿಂತಿದ್ದ ಪ್ರಸಂಗ ನಡೆಯಿತು.